ದಂತಿವರ್ಮನ್

1. ರಾಷ್ಟ್ರಕೂಟ ರಾಜವಂಶದ ಸ್ಥಾಪಕನಾದ ದಂತಿದುರ್ಗನ ಪೂರ್ವಜರಲ್ಲೊಬ್ಬ. ಬಾದಾಮಿ ಚಾಳುಕ್ಯರ ಸಾಮಂತ.
2. ಕಾಂಚೀಪುರದಲ್ಲಿ ರಾಜ್ಯವಾಳುತ್ತಿದ್ದ ಪಲ್ಲವ ವಂಶದ ಒಬ್ಬ ದೊರೆ (ಸು. 795-845). ನಂದಿವರ್ಮನ್ ಪಲ್ಲವಮಲ್ಲನ ಮಗ. ರಾಷ್ಟ್ರಕೂಟ ರಾಜಕುಮಾರಿ ರೇವ ಇವನ ತಾಯಿ. ಕದಂಬ ರಾಜಕುಮಾರಿ ಅಗ್ಗಲ ನಿಮ್ಮತಿಯನ್ನು ಮದುವೆಯಾಗಿದ್ದ. ಪಲ್ಲವ ಕುಲಕ್ಕೆ ರತ್ನಪ್ರಾಯನೆಂದು ಪ್ರಸಿದ್ಧನಾಗಿದ್ದಾನೆ. ಈತ ಭಾರದ್ವಜ ಗೋತ್ರಜನೆಂದು ಮದರಾಸಿನ ಪಾರ್ಥಸಾರಥಿ ದೇವಾಲಯದಲ್ಲಿ ಸಿಕ್ಕಿರುವ ಶಾಸನದಿಂದ ತಿಳಿದುಬರುತ್ತದೆ. ಈ ದೇವಾಲಯವನ್ನು ಪಲ್ಲವರು ಕಟ್ಟಿಸಿದರೆಂದು, ಭೂದಾನ ಕೊಡುವ ನಿಮಿತ್ತ ಈ ಶಾಸನ ಪ್ರಕಟಿತವಾಯಿತೆಂದು ತಿರುಮಂಗೈ ಆಳ್ವಾರ್ ತಿಳಿಸಿದ್ದಾರೆ. ದಂತಿವರ್ಮನ ರಾಜ್ಯವನ್ನು ಪಾಂಡ್ಯ ವರಗುಣ ಮಹಾರಾಜ ಮುತ್ತಿದನೆಂದು ಅಂಬಾಸಮುದ್ರದ ಶಾಸನ ತಿಳಿಸುತ್ತದೆ. ಬಾನರಾಜ ವಿಜಯಾದಿತ್ಯ ಮಾವಲಿನರಾಯರ್ ದಂತಿವರ್ಮನ ಅಧೀನ ರಾಜನಾಗಿದ್ದ. ದಂತಿವರ್ಮನನ್ನು ರಾಷ್ಟ್ರಕೂಟ ದೊರೆ 3ನೆಯ ಗೋವಿಂದ ಸೋಲಿಸಿದನೆಂದು (803-804) ತಿಳಿದುಬರುತ್ತದೆ.	
											(ಎಚ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ